ರೋಹಿಲರು
ಟಾರ್ಟರ್ ಸಂತತಿಯ ಶಾಖೆಗಳಲ್ಲಿ ಅತ್ಯಂತ ವಿಶಿಷ್ಟವಾದ ಶಾಖೆಗೆ ಸೇರಿದ ಒಂದು ಪಂಗಡ. ಕೆಲವೂಮ್ಮೆ ಇವರನ್ನು ಬಂಗ್ಯುಶನ್ ಆಫ್ಘನ್ನರೆಂದೂ ಕೆಲವೂಮ್ಮೆ ರೋಹಿಲರೆಂದೂ ಕರೆಯಲಾಗಿದೆ. ಇವರಲ್ಲಿ ಅನೇಕರು ಸು. 1774ರಲ್ಲಿ ಮೊಗಲ್ ಚಕ್ರವರ್ತಿ ಫರುಖಾಶಿಯಾರ್‍ನ ಆಳ್ವಿಕೆಯ ಕಾಲದಲ್ಲಿ ಅವನ ಅನುಮತಿ ಪಡೆದು ಭಾರತದಲ್ಲಿ ನೆಲೆಸಿದರು.

ಮೊಗಲ್ ಚಕ್ರವರ್ತಿಗಳು ತಾವು ಟಾರ್ಟರ್ ಮೂಲದವರೆಂದು ಭಾವಿಸಿದ್ದುದರಿಂದ ತಮ್ಮ ಅಧಿಕಾರಕ್ಕೆ ವಿರೋಧ ಬಂದಾಗ ತಮ್ಮ ಮತಧರ್ಮಕ್ಕೆ ಸೇರಿದ ರೋಹಿಲರನ್ನು ಕೂಲಿ ಸೈನಿಕರಾಗಿ ಬಳಸಿ ಕೊಳ್ಳುತ್ತಿದ್ದರು. ಇಷ್ಟು ಮಾತ್ರವಲ್ಲದೆ ಒಬ್ಬ ಆಫ್ಘನ್ ಅಧಿಕಾರಿಯ ಪಾಲನೆ ಪೋಷಣೆಯಲ್ಲಿ ಇದ್ದ ಅಲಿ ಮಹಮದ್ ಖಾನ್ ಸೈಯದ್ ಸಹೋದರರ ವಿರುದ್ಧ ನಡೆದ ದಾಳಿಯಲ್ಲಿ ಮಾಡಿದ ಸಹಾಯಕ್ಕಾಗಿ ನವಾಬ್ ಎಂಬ ಬಿರುದನ್ನು ಮತ್ತು ಹಲವು ಪ್ರದೇಶಗಳನ್ನು ದತ್ತಿಯಾಗಿ ಪಡೆದುಕೊಂಡ. ಕಾಲಕ್ರಮೇಣ ಅವನು ಸ್ವತಂತ್ರ ರಾಜನಾಗಲು ಪ್ರಯತ್ನಿಸಿದ. ಅವನು ಅನೇಕ ಆಫ್ಘನ್ನರನ್ನು ತನ್ನ ಸೇವೆಗೆ ನೇಮಿಸಿಕೊಂಡಿದ್ದ. ನಾದಿರ್‍ಷಾ ಕಾಂದಹಾರದ ಮೇಲೆ ದಾಳಿ ಮಾಡಿದಾಗ ಅನೇಕ ಆಫ್ಘನ್ನರು ಭಾರತಕ್ಕೆ ಓಡಿಬಂದು ಅಲಿ ಅಹಮದನ ಆಶ್ರಯವನ್ನು ಪಡೆದು ಕೊಂಡರು. ಇವರನ್ನು ಬೆಟ್ಟಪ್ರದೇಶಗಳ ಜನರು ಅಥವಾ ರೋಹಿಲರೆಂದು ಕರೆಯಲಾಯಿತು. ಅಲಿ ಅಹಮದನೇ ರೋಹಿಲ ರಾಜ್ಯದ ಸ್ಥಾಪಕನೆಂದು ಭಾರಿಸಲಾಗಿದೆ.

1720ರ ದಶಕಗಳಲ್ಲಿ ಮೊಗಲರ ಸೇವೆಯಲ್ಲಿದ್ದ ರೋಹಿಲರು ಕಾಲಕ್ರಮೇಣ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿಕೊಂಡು ಹಿಂದುಗಳಿಂದ ತೆರಿಗೆ ವಸೂಲಿ ಮಾಡಲು ಆರಂಭಿಸಿದರು. ಇವರ ಸಂಖ್ಯೆ ಸೀಮಿತ ವಾಗಿದ್ದರೂ ಬಹುಸಂಖ್ಯಾತ ಹಿಂದೂಗಳ ಮೇಲೆ ಅಧಿಕಾರ ಚಲಾಯಿಸುತ್ತಿದ್ದುದು ಇವರ ದಕ್ಷತೆಯ ದ್ಯೋತಕವಾಗಿತ್ತು. ರೋಹಿಲರು ಅಲ್ಲಿಯವರೆಗೆ ಭಾರತ ಕಂಡಿಲ್ಲದಂಥ ಸುವ್ಯವಸ್ಥಿತ ಸರ್ಕಾರ ಸ್ಥಾಪಿಸಿದ್ದರು. ಗಂಗಾನದಿಯ ಎರಡು ಕಡೆಗಳಲ್ಲೂ ಹರಡಿಕೊಂಡಿದ್ದ ಇವರ ರಾಜ್ಯ ಸಂಪದ್ಭರಿತವಾಗಿತ್ತು. ಇದರಿಂದಾಗಿ ನೆರೆಯ ರಾಜ್ಯ ಔಧ್‍ನ ಸುಲ್ತಾನ, ಮರಾಠರು ಹಾಗೂ ಬ್ರಿಟಿಷ್ ಮಹತ್ವಾಕಾಂಕ್ಷಿಗಳ ಹದ್ದಿನ ದೃಷ್ಟಿ ರೋಹಿಲರ ರಾಜ್ಯದ ಮೇಲೆ ಬಿತ್ತು. 1770ರಲ್ಲಿ ಮರಾಠರು ರೋಹಿಲರ ಮುಖಂಡ ಜಬೆತ್‍ಖಾನ್‍ನನ್ನು ಸೋಲಿಸಿ ರೋಹಿಲ ಖಂಡದ ಅನೇಕ ಪ್ರದೇಶಗಳನ್ನು ಆಕ್ರಮಿಸಿಕೊಂಡರು. ಮರಾಠರ ದಾಳಿಯನ್ನು ನಿರೀಕ್ಷಿಸಿದ ರೋಹಿಲರ ನಾಯಕ ಹಫಿಜ್ ರಹಮದ್‍ಖಾನ್ ಔಧ್‍ನ ನವಾಬನಿಗೆ ನಲವತ್ತು ಲಕ್ಷ ರೂಪಾಯಿಗಳನ್ನು ಕೊಡಲೊಪ್ಪಿ, ಅವನ ಸಹಾಯದಿಂದ 1773ರಲ್ಲಿ ಮರಾಠರ ದಾಳಿಯನ್ನು ಹಿಮ್ಮೆಟ್ಟಿಸಿದನಾದರೂ ತನ್ನ ವಾಗ್ದಾನದಂತೆ ನವಾಬನಿಗೆ ಹಣ ಕೊಡಲಿಲ್ಲ. ಔಧ್‍ನ ನವಾಬನು  ಮೊಗಲ್ ಚಕ್ರವರ್ತಿ ಹಾಗೂ ಜಬತ್ ಖಾನನ ಸ್ನೇಹಗಳಿಸಿದುದಲ್ಲದೆ, ಬನಾರಸ್ ಒಪ್ಪಂದದಂತೆ ಬ್ರಿಟಿಷರ ಸೈನ್ಯ ಸಹಾಯದಿಂದ ಮಿರಾಪುರ ಕಾಟ್ರ ಎಂಬಲ್ಲಿ ನಡೆದ ಕದನದಲ್ಲಿ (1774) ಹಫಿಜ್ ರಹಮದ್‍ಖಾನ ನನ್ನು ಕೊಂದ. ರೋಹಿಲರ ರಾಜ್ಯ ಔಧ್ ಸುಲ್ತಾನನ ವಶವಾಯಿತು. ಆಗ ಇಪ್ಪತ್ತು ಸಾವಿರ ರೋಹಿಲರು ದೇಶತ್ಯಾಗ ಮಾಡಬೇಕಾಯಿತು. ಇದರ ಫಲವಾಗಿ ಬ್ರಿಟಿಷ್ ಗೌರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಅಪಖ್ಯಾತಿಗೆ ಗುರಿಯಾದ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

(ಜಿ.ಎಲ್.)